ಒಳಸುರಿಕ ಗ್ರಂಥಿಗಳು: ಪ್ರಾಣಿಗಳಲ್ಲಿ, ಪ್ರೋಟೀನು ತೆರನ ವಿಶೇಷ ಬಗೆಯ ರಸಗಳನ್ನು ತಯಾರಿಸಿ, ನಾಳಗಳ ನೆರವಿಲ್ಲದೆ ನೇರವಾಗಿ ರಕ್ತಕ್ಕೇ ಸುರಿವ ಗ್ರಂಥಿಗಳಿವು; ಇವನ್ನು ನಿರ್ನಾಳಗ್ರಂಥಿಗಳು ಎಂದೂ ಕರೆಯುತ್ತಾರೆ. (ಎಂಡೊಕ್ರಿನ್ ಗ್ಲ್ಯಾಂಡ್ಸ್‌). ಈ ಸುರಿಕೆಗಳಲ್ಲಿ ಬಲು ವಿಶಿಷ್ಟವಾದ, ಒಂದೋ ಹಲವೋ ಚೋದನಿಕಗಳೆಂಬ (ಹಾರ್ಮೋನ್ಸ್‌) ರಸಾಯನ ವಸ್ತುಗಳಿರುತ್ತವೆ. ಇವು ಬೇರೆ ಊತಕಗಳ, ಅಂಗಗಳ ಅಂಗಕ್ರಿಯೆಯ ಗತಿಗಳ ಮೇಲೆ ತೀರ ಕಿರಿಯ ಪ್ರಮಾಣಗಳಲ್ಲೇ ವಿಪರೀತ ಪ್ರಭಾವ ತೋರಿ ಚೋದಿಸುತ್ತವೆ. ಶಸ್ತ್ರಕ್ರಿಯೆಯಿಂದ ಒಂದು ಒಳಸುರಿಕ ಗ್ರಂಥಿಯನ್ನು ಪ್ರಾಣಿಯಲ್ಲಿ ಕೊಯ್ದು ತೆಗೆದುಹಾಕಿದರೆ ಗೊತ್ತಾದ ಕೊರೆಯ ಸ್ಥಿತಿ ತಲೆದೋರುವುದು. ಆಮೇಲೆ ಆ ಗ್ರಂಥಿಯ ಚೋದನಿಕವನ್ನು ಕೊಟ್ಟರೆ ಎಂದಿನ ಸ್ಥಿತಿ ಉಂಟಾಗುತ್ತದೆ. (ನೋಡಿ- ಗ್ರಂಥಿ)

ಈಗ ಗೊತ್ತಿರುವಂತೆ, ಸಸ್ತನಿಗಳಲ್ಲಿ ತೆಮಡಿಕ (ಪಿಟ್ಯುಟರಿ) ಗ್ರಂಥಿಯ ಮುಂದಣ, ಹಿಂದಣ ಹಾಲೆಗಳು (ಲೋಬ್ಸ್‌), ಗುರಾಣಿಕ (ತೈರಾಯ್ಡ್‌), ಬದಿ ಗುರಾಣಿಕಗಳು (ಪ್ಯಾರತೈರಾಯ್ಡ್‌ಸ್), ಮಾಂಸಲಿಯ ದೀವುಗಳು (ಪ್ಯಾಂಕ್ರಿಯಾಟಿಕ್ ಐಲೆಟ್ಸ್‌), ಅಡ್ರಿನಲ್ ರಗಟೆ (ಕಾರ್ಟೆಕ್ಸ್‌), ಅಡ್ರಿನಲ್ ಕುಸುರಿ (ಮೆಡುಲ್ಲ), ಅಂಡಾಶಯ (ಓವರಿ), ತರಡು (ಟೆಸ್ಟಿಸ್) ಗ್ರಂಥಿಗಳಿವೆ. ಬೆನ್ನೆಲುಬಿರದ ಜೀವಿಗಳಲ್ಲಿ ಮಾತ್ರ ಬೆಳವಣಿಗೆ, ರೂಪಬದಲಿಕೆಗಳಿಗಾಗಿ ಚೋದನಿಕಗಳನ್ನು ಸುರಿಸುವ ಒಳಸುರಿಕ ನರರಚನೆಗಳು ಇರುತ್ತವೆ. ಅಲ್ಲದೆ ರಚನೆಯಲ್ಲಿ ವಿಶೇಷ ಗ್ರಂಥಿಗಳಂತೆ ತೋರಿದ ಕೆಲವು ಊತಕಗಳು ಕೂಡ ಚೋದನಿಕ ವಸ್ತುಗಳನ್ನು ಸುರಿಸಬಹುದು. ರಸ ಸುರಿಸುವಂತೆ, ಚಲಿಸುವಂತೆ ಆಹಾರ ನಾಳಿಯನ್ನು ಚೋದಿಸುವ ರಸಗಳನ್ನು ಸುರಿಸುವ, ಕರುಳಿನಲ್ಲೇ ಇರುವ ಕೆಲವು ಜೀವಕಣ ತಂಡಗಳು ಇಂಥವೇ. ಕೇಂದ್ರದ ನರದ ಮಂಡಲದಲ್ಲಿ ಕೆಲವು ಜೀವಕಣ ತಂಡಗಳು ನರಕಣಗಳಾಗೂ ಚೋದನಿಕ ತಯಾರಕಗಳಾಗೂ ವರ್ತಿಸುತ್ತವೆ. (ನೋಡಿ- ಚೋದನಿಕಗಳು)

 ತೆಮಡಿಕ  
ಇಳಿಬೆಳವಿ (ಹೈಪೊತ್ಯಾಲಮಸ್) ಎಂದೂ ಹೆಸರಿರುವ, ಮಾನವನಲ್ಲಿ ಬಟಾಣಿಕಾಳಿನ ಗಾತ್ರದ ಕೇವಲ ಆರೇ ಗ್ರಾಂ ತೂಕವಿರುವ ಈ ಗ್ರಂಥಿ ಮಿದುಳಿನ ತಳದಲ್ಲಿ ನಟ್ಟನಡುವೆ ಒಂದು ಸಣ್ಣ ಗುಳಿಯಲ್ಲಿದೆ. ಅಂಗರಚನೆ, ಬೆಳೆವಣಿಗೆ, ನಿಜಗೆಲಸಗಳಲ್ಲಿ ಕೊನೆಯ ಪಕ್ಷ ಏಳು ಕ್ರಿಯಾಂಶಗಳನ್ನಾದರೂ ಸುರಿಸುವ ಮುಂದಣ ಹಾಲೆ ಇಲ್ಲವೇ ಗ್ರಂಥಿಭಾಗವೂ ಎರಡು ಚೋದನಿಕಗಳನ್ನು ಸುರಿಸುವ ಹಿಂದಣ ಹಾಲೆ ಇಲ್ಲವೇ ನರಭಾಗವೂ ಈ ಗ್ರಂಥಿಯಲ್ಲಿವೆ. ಬಣ್ಣವಸ್ತುಗಳಿಂದ ರಂಗೇರುವ ಗುಣದಿಂದ ಬೇರೆಬೇರೆಯಾಗಿ ವಿಂಗಡಿಸಬಹುದಾದ ಕೊನೆಯ ಪಕ್ಷ ಮೂರು ಬಗೆಯ ಜೀವಕಣ ಗಳನ್ನು ಮುಂದಣ ಹಾಲೆಯಲ್ಲಿ ಗುರುತಿಸಬಹುದು: ಕೆನ್ನೇಸರನುರಾಗಿಗಳು (ಇಯೋಸಿನೋಫಿಲ್ಸ್‌) ಇಲ್ಲವೇ ಆಮ್ಲಾನುರಾಗಿಗಳು (ಅಸಿಡೋಫಿಲ್ಸ್‌), ಮಾರಾಮ್ಲಾನು ರಾಗಿಗಳು (ಬೇಸೋಫಿಲ್ಸ್‌), ಕ್ರೋಮಂಜುಕುಳಿಗಳು (ಕ್ರೋಮೋಫೋಬ್ಸ್‌). ಒಂದೊಂದು ಬಗೆಯ ಜೀವಕಣದಿಂದಲೂ ಇಂಥವೇ ಚೋದನಿಕಗಳು ಹುಟ್ಟುವುವೆಂದು ಹೇಳಲೂಬಹುದು.

 ಕೆಳತಲೆಯರೆ 
ಮಿದುಳಿನ ನಡುವಿನಲ್ಲಿ ಸಣ್ಣ ಅಂಕಣದಂತಿರುವ ಕೆಳತಲೆಯರೆ (ಹೈಪೊತ್ಯಾಲಮಸ್). ತೆಮಡಿಕ ಗ್ರಂಥಿಯ ಹಿಂದಣ ಹಾಲೆಗೆ ಹೋಗುವ ನರಗಳು ಆ ಹಾಲೆಯ ಚಟುವಟಿಕೆಗಳನ್ನು ಅಂಕೆಗೊಳಿಸುತ್ತವೆ. ಹಾಗೇ ಕೆಳತಲೆಯರೆಯಿಂದ ಮುಂದಣ ಹಾಲೆಗೆ ಚೋದನಿಕ ರಸಗಳು ರಕ್ತದ ಮೂಲಕ ಸಾಗಿ ಅದರ ಕೆಲವು ರಸ ಸುರಿಕೆಗಳನ್ನೂ ನಿಯಂತ್ರಿಸುವುವು (ನೋಡಿ- ಕೆಳತಲೆಯರೆ-(ಕೆಳಶಿರಗುಳಿ).

 ಗುರಾಣಿಕ 
ಕೊರಳಲ್ಲಿ ಗೋಮಾಳೆಯ ಕೆಳಗಡೆ ನಡುವೆಯೂ ಉಸಿರ್ನಾಳದ ಇಪ್ಪಕ್ಕಗಳಲ್ಲೂ ಈ ಗ್ರಂಥಿ ಇದೆ. ಇದಕ್ಕೆ ರಕ್ತದ ಸರಬರಾಜು ಹೆಚ್ಚು. ಇದರ ನಡುಭಾಗ ಸಣ್ಣಗಿದ್ದು ಪಕ್ಕಗಳು ರೆಕ್ಕೆಯಾಕಾರದಲ್ಲಿರುವುವು (ನೋಡಿ- ಗುರಾಣಿಕ-ಗ್ರಂಥಿ).

 ಬದಿಗುರಾಣಿಕೆಗಳು 
ಸಾಮಾನ್ಯವಾಗಿರುವ ಇದರ ನಾಲ್ಕೂ ಗ್ರಂಥಿಗಳೂ ಗುರಾಣಿಕ ಗ್ರಂಥಿಯ ಹಿಂಬದಿಯಲ್ಲೊ ಬದಿಯಲ್ಲೊ ಹುದುಗಿರುತ್ತವೆ. ಕೆಲವೇಳೆ ವಿರಳವಾಗಿ 2-6 ಗ್ರಂಥಿಗಳಿರಲೂಬಹುದು. ಇವು ಗುಲಗಂಜಿ ಗಾತ್ರಕ್ಕಿರುತ್ತವೆ. ಹೆಚ್ಚಾಗಿರುವವಲ್ಲಿ ಕೆಲವು ಎದೆಯೊಳಗಿರಬಹುದು.

 ಮಾಂಸಲಿ 
ಹೊಟ್ಟೆಯಲ್ಲಿ, ಹಿಂದಣ ಗೋಡೆಯ ಮೇಲೆ ಸಣ್ಣ ಕರುಳಿನ ಮೊದಲನೆಯ ಭಾಗವಾದ ದುರಾರ್ಗರುಳಿನ (ಡುಯೋಡಿನಂ) ತಿರುವಿನಲ್ಲಿ ಈ ಗ್ರಂಥಿಯಿದೆ. ಆಹಾರವನ್ನು ಅರಗಿಸುವ ಈ ಗ್ರಂಥಿಯ ರಸಗಳನ್ನು ನಾಳಗಳ ಮೂಲಕ ಸಣ್ಣ ಕರುಳಿಗೊಯ್ದರೂ ಉಳಿದ ಭಾಗದಲ್ಲಿ ತಯಾರಾಗುವ ಇನ್ಸುಲಿನ್ ಒಂದು ಚೋದನಿಕ. ಮೊದಲಿನದು ಹೊರಸುರಿಕ (ಎಕ್ಸೊಕ್ರಿನ್) ಎರಡನೆಯದು ಒಳಸುರಿಕ (ಎಂಡೊಕ್ರಿನ್) ರಸ. ಒಳಸುರಿಕ ಭಾಗ ಒಟ್ಟಾಗಿ ಒಂದೆಡೆಯಲ್ಲಿರದೆ ಅಲ್ಲಲ್ಲಿ ಜೀವಕಣ ತಂಡಗಳಾಗಿ ದ್ವೀಪಗಳಂತಿದೆ. ಇವಕ್ಕೆ ಲ್ಯಾಂಗರ್ಹ್ಯಾನ್ಸನ ದ್ವೀಪುಗಳು ಎಂದು ಹೆಸರಿಸಿದೆ. ಈ ಜೀವಕಣಗಳಲ್ಲಿ ಆಲ್ಫ, ಬೀಟಗಳೆಂಬ ಎರಡು ಬಗೆಗಳಿರುವುವು.

 ಅಡ್ರಿನಲುಗಳು 
ಒಂದೊಂದು ಮೂತ್ರಪಿಂಡದ ಮೇಲ್ಗಡೆಯ ತ್ರಿಭುಜಾಕಾರಿ ಟೋಪಿಯಂತೆ ಅಂಟಿಕೊಂಡಿರುವ ಈ ಸಣ್ಣಗ್ರಂಥಿಗಳು ನಿಜವಾಗಿ ಒಂದೊಂದರಲ್ಲೂ ಎರಡು ಬೇರೆ ಬೇರೆ ಗ್ರಂಥಿಗಳಿವೆ : ಒಳಗಿನ ಭಾಗವಾದ ಕುಸುರಿ (ಮೆಡುಲ) ಹೊರಗಿನ ಭಾಗವಾದ ರಗಟೆ (ಕಾರ್ಟೆಕ್ಸ್‌). ಅನುವೇದನಾ ನರಮಂಡಲದ (ಸಿಂಪತಟಿಕ್ ನರ್ವಸ್ ಸಿಸ್ಟಂ) ನರಗಂಟುಗಳ (ಗ್ಯಾಂಗ್ಲಿಯ) ಬಳಿ ಹರಡಿ ಬಿದ್ದಿರುವ ತೆರನ ಕ್ರೋಮ್ನೆಂಟಿನ (ಕ್ರೋಮಫಿನ್) ಜೀವಕಗಳು ಅಡ್ರಿನನಿನಲ್ಲಿ ಕುಸುರಿಯಲ್ಲಿ ಇರುವುವು (ನೋಡಿ- ಅಡ್ರಿನಲ್-ಗ್ರಂಥಿಗಳು).

 ತರಡುಗಳು 
ಸಸ್ತನಿಗಳಲ್ಲಿ, ತೊಡೆಗಳ ನಡುವಣ ಸಂದಲ್ಲಿ ಇಳಿಬಿದ್ದಿರುವ ಚೀಲದಂತಿರುವ ಬೀಜಚೀಲದಲ್ಲಿ (ಸ್ಕ್ರೋಟಂ) ಪಕ್ಕಪಕ್ಕದಲ್ಲಿ ಬೇರೆಬೇರೆಯಾಗಿ ಎರಡಿರುತ್ತವೆ. ಮೈಕಾವಿಗಿಂತಲೂ ಇವು ತಣ್ಣಗಿರುವುವು. ರೇತು ಕಣಗಳು ವಿಕಾಸವಾಗಲು ಹೀಗೆ ತಣ್ಣಗಿರಲೇಬೇಕು. ರೇತುಸಾಗಿನ ಕಿರುನಾಳಗಳಲ್ಲಿ (ಸೆಮನಿಫೆರಸ್ ಟ್ಯುಬ್ಯೂಲ್ಸ್‌) ರೇತು ಕಣಗಳು ವಿಕಾಸವಾಗುತ್ತವೆ. ಈ ಕಿರುನಾಳಗಳ ನಡುವೆ ಇರುವ ಊತಕಾಂತರ (ಇಂಟರ್ಸ್ಟಿಷಿಯಲ್) ಜೀವಕಣ ತಂಡಗಳು ಪುಲ್ಲಿಂಗಿಕಾರಿ (ಟೆಸ್ಟೊಸ್ಟಿರೋನ್) ಜೋದನಿಕವನ್ನು ಸುರಿಸುತ್ತವೆ.

ಅಂಡಾಶಯಗಳು: ಕೆಳಹೊಟ್ಟೆಯ ಕಿಳ್ಗುಳಿಯಲ್ಲಿ (ಪೆಲ್ವಿಸ್) ಗರ್ಭಕೋಶದ ಎರಡು ಪಕ್ಕಗಳಲ್ಲೂ ಒಂದೊಂದು ಅಂಡಾಶಯ ಗ್ರಂಥಿ ಇರುವುದು.
ಮಾಸು: ಬಸುರಿಯ ಗರ್ಭಕೋಶದಲ್ಲಿ ಪಿಂಡಗೂಸು (ಫೀಟಸ್) ಬೆಳೆದಂತೆಲ್ಲ ಅಂಡಾಶಯದ ಒಳಸುರಿಕ ಕೆಲಸವನ್ನು ಇದು ವಹಿಸಿಕೊಳ್ಳುವುದರಿಂದ ಇದೂ ಒಂದು ಒಳಸುರಿಕ ಗ್ರಂಥಿ ಎನ್ನಬಹುದು (ನೋಡಿ- ಒಳಸುರಿಕೆ-ಶಾಸ್ತ್ರ).	(ಎಂ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ